ಬೆಂಗಳೂರು,ಜನವರಿ 16: ಪರೀಕ್ಷಾ ಕಾಲದಲ್ಲಿ ಶಾಲಾ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗದಂತೆ ವಿದ್ಯುತ್ ಪೂರೈಸಲು ಪ್ರತಿನಿತ್ಯ 10 ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಜನವರಿ ಮೂರನೇ ವಾರಾಂತ್ಯದಿಂದ ಏಪ್ರಿಲ್ ಅಂತ್ಯದವರೆಗೆ ಈ ಉದ್ದೇಶದಿಂದಲೇ ಪವರ್ ಎಕ್ಸ್ಚೇಂಜ್ ವತಿಯಿಂದ ವಿದ್ಯುತ್ ಖರೀದಿಸಲು ಸರ್ಕಾರ ಮುಂದಾಗಿದೆ ಎಂದಿವೆ.
ಶಾಲಾ ಮಕ್ಕಳ ವ್ಯಾಸಾಂಗಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರತಿನಿತ್ಯ ಬೆಳಿಗ್ಗೆ ೪ ರಿಂದ ೬ ಗಂಟೆಯವರೆಗೆ ಹಾಗೂ ರಾತ್ರಿ ೭ ರಿಂದ ೧೧ ಗಂಟೆಯವರೆಗೆ ವಿದ್ಯುತ್ ಒದಗಿಸುವುದಾಗಿ ಇಂಧನ ಸಚಿವ ಈಶ್ವರಪ್ಪ ಕೆಲ ದಿನಗಳ ಹಿಂದೆ ಪ್ರಕಟಿಸಿದ್ದರು.
ಅದರ ಪ್ರಕಾರ, ಈ ಅವಧಿಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಸಲು ಪ್ರತಿನಿತ್ಯ ೧೦ ಮಿಲಿಯನ್ ಯೂನಿಟ್ಗಳಷ್ಟು ವಿದ್ಯುತ್ನ ಅಗತ್ಯವಿದೆ ಎಂದು ಇಂಧನ ಇಲಾಖೆ ಉನ್ನತಾಧಿಕಾರಿಗಳು ಸರ್ಕಾರಕ್ಕೆ ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯೂನಿಟ್ಗೆ ತಲಾ ಆರು ರೂ ದರದಲ್ಲಿ ಪವರ್ ಎಕ್ಸ್ಚೇಂಜ್ ಮೂಲಕ ಹತ್ತು ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿಸಲು ಸಿಎಂ ಯಡಿಯೂರಪ್ಪ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆ ಮೂಲಕ ಸರಿ ಸುಮಾರು ನೂರು ದಿನಗಳ ಕಾಲ ವಿದ್ಯುತ್ ಖರೀದಿಸಲಿರುವ ಸರ್ಕಾರ ಇದಕ್ಕಾಗಿ ೬೦೦ ಕೋಟಿ ರೂ ಒದಗಿಸಬೇಕಾಗಿದೆ.
ನಿರಂತರ ಜ್ಯೋತಿಗೆ ಸಮಸ್ಯೆಯಿಲ್ಲ
ಈ ಮಧ್ಯೆ ಗ್ರಾಮೀಣ ಪ್ರದೇಶಗಳಿಗೆ ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ ವಿದ್ಯುತ್ ಪೂರೈಸುವ ನಿರಂತರ ಜ್ಯೋತಿ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದ್ದು ಸದರಿ ಯೋಜನೆಗೆ ಅಗತ್ಯವಾದ ವಿದ್ಯುತ್ ಪೂರೈಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದೂ ಮೂಲಗಳು ಸ್ಪಷ್ಟ ಪಡಿಸಿವೆ.
ರಾಜ್ಯದಲ್ಲಿ ಈಗ ಪೂರೈಕೆಯಾಗುತ್ತಿರುವ ವಿದ್ಯುತ್ನ ಪ್ರಮಾಣ ೧೩೦ ಮಿಲಿಯನ್ ಯೂನಿಟ್ಗಳಷ್ಟಿದ್ದು ನಿರಂತರ ಜ್ಯೋತಿ ಕಾರ್ಯಕ್ರಮ ಅನುಷ್ಟಾನಗೊಂಡ ನಂತರ ೧೪೫ ಮಿಲಿಯನ್ ಯೂನಿಟ್ಗಳಷ್ಟು ವಿದ್ಯುತ್ನ ಅವಶ್ಯಕತೆ ಬೀಳಲಿದೆ.
ಯೋಜನೆಯ ಮೊದಲ ಹಂತ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಆ ವೇಳೆಗೆ ಹದಿನೈದು ಮಿಲಿಯನ್ ಯೂನಿಟ್ ವಿದ್ಯುತ್ ಹೆಚ್ಚುವರಿಯಾಗಿ ಬೇಕಾಗಲಿದೆ.ಆದರೆ ಅದಕ್ಕೂ ಮುನ್ನ ಅಂದರೆ ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ೨೭ ಮಿಲಿಯನ್ ಯೂನಿಟ್ಗಳಷ್ಟು ಹೆಚ್ಚುವರಿ ವಿದ್ಯುತ್ ಲಭ್ಯವಾಗಲಿದೆ ಎಂಬುದು ಮೂಲಗಳ ಹೇಳಿಕೆ.
ಉಡುಪಿ ಪವರ್ ಕಾರ್ಪೋರೇಷನ್ ವತಿಯಿಂದ ಕನಿಷ್ಟ ಒಂದು ಸಹಸ್ರ ಮೆಗಾವ್ಯಾಟ್ ವಿದ್ಯುತ್,ರಾಯಚೂರು ಎಂಟನೇ ಘಟಕದ ವತಿಯಿಂದ ಇನ್ನೂರಾ ಐವತ್ತು ಮೆಗಾವ್ಯಾಟ್ ವಿದ್ಯುತ್ ಮಾರ್ಚ್ ತಿಂಗಳ ವೇಳೆಗೆ ಲಭ್ಯವಾಗಲಿದೆ.
ಇದೇ ರೀತಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ಕನಿಷ್ಟ 500 ಮೆಗಾವ್ಯಾಟ್ ವಿದ್ಯುತ್ ಜೂನ್ ಅಂತ್ಯದ ವೇಳೆಗೆ ಲಭ್ಯವಾಗಲಿದೆ ಎಂದು ಈ ಮೂಲಗಳು ವಿವರ ನೀಡಿವೆ.
ಈ ಪ್ರಮಾಣದ ವಿದ್ಯುತ್ ಲಭ್ಯವಾದರೆ ನಗರ ಪ್ರದೇಶಗಳಲ್ಲಿರುವ ಎರಡು ಗಂಟೆಗಳ ಕಾಲದ ಲೋಡ್ಷೆಡ್ಡಿಂಗ್ನ್ನು ತೆಗೆದು ಹಾಕುವುದಲ್ಲದೇ,ರೈತರಿಗೆ ಹಗಲಿನಲ್ಲೇ ನಿರಂತರವಾಗಿ ಆರು ಗಂಟೆ ವಿದ್ಯುತ್ ಪೂರೈಸಲೂ ಸಾಧ್ಯವಾಗಲಿದೆ ಎಂಬುದು ಈ ಮೂಲಗಳ ಅಭಿಪ್ರಾಯ.