ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಕಡ್ಡಾಯ ವಿದ್ಯುತ್ ಪೂರೈಕೆ ಭರವಸೆ

ಬೆಂಗಳೂರು: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಕಡ್ಡಾಯ ವಿದ್ಯುತ್ ಪೂರೈಕೆ ಭರವಸೆ

Wed, 13 Jan 2010 17:37:00  Office Staff   S.O. News Service
ಬೆಂಗಳೂರು, ಜನವರಿ 13:ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಪರೀಕ್ಷಾ ಕಾಲದಲ್ಲಿ ವ್ಯಾಸಾಂಗಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ತೀರ್ಮಾನಿಸಿರುವ ಸರ್ಕಾರ ಬೆಳಿಗ್ಗೆ 4 ರಿಂದ 6 ರವರೆಗೆ ಹಾಗೂ ರಾತ್ರಿ 7 ರಿಂದ 11 ಗಂಟೆಯವರೆಗೆ ಕಡ್ಡಾಯವಾಗಿ ವಿದ್ಯುತ್ ಪೂರೈಕೆ ಮಾಡುವುದಾಗಿ ಘೋಷಿಸಿದೆ. 

ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ಇಂಧನ ಇಲಾಖೆಯ ಉನ್ನತಾಧಿಕಾರಿಗಳ ಜತೆ ನಡೆಸಿದ ಚರ್ಚೆಯ ನಂತರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಈ ವಿಷಯ ಪ್ರಕಟಿಸಿದರು.

ಶಾಲಾ ಮಕ್ಕಳಿಗೆ  ಪರೀಕ್ಷಾ ಕಾಲದಲ್ಲಿ ವ್ಯಾಸಾಂಗಕ್ಕೆ ತೊಂದರೆಯಾಗದಂತೆ  ನೋಡಿಕೊಳ್ಳುವುದಾಗಿ ಸರ್ಕಾರ ಈಗಾಗಲೇ ಭರವಸೆ  ನೀಡಿದೆ.ಇದಕ್ಕಾಗಿ ಅಗತ್ಯವಿರುವ ಹೆಚ್ಚುವರಿ ವಿದ್ಯುತ್‌ನ್ನು ಖರೀದಿ ಮಾಡಿ ಪೂರೈಕೆ ಮಾಡಲಿದೆ ಎಂದರು. 
ಇನ್ನು ಮುಂದೆ  ರಾಜ್ಯದ ಯಾವುದೇ ಭಾಗಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳು  ಹಾಳಾದರೆ ಹತ್ತೇ ದಿನಗಳಲ್ಲಿ ಸರಿಪಡಿಸಿ  ಕೊಡಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ  ಎಂದೂ ಅವರು ವಿವರ ನೀಡಿದರು. 

ಸಂಪೂರ್ಣವಾಗಿ ಹಾಳಾದರೆ  ಹೊಸ ಟ್ರಾನ್ಸ್‌ಫಾರ್ಮರ್ ಒದಗಿಸುವುದು ಮತ್ತು ದುರಸ್ಥಿಪಡಿಸಲು ಸಾಧ್ಯವಿದ್ದರೆ ಅದನ್ನು ಮಾಡುವುದು ಕೇವಲ ಹತ್ತು ದಿನಗಳ ಒಳಗಾಗಿ ಪೂರ್ಣಗೊಳ್ಳಬೇಕು ಎಂದು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಪ್ರತೀ ವಿದ್ಯುತ್  ಸರಬರಾಜು ಕಂಪನಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರತೀ ತಿಂಗಳ ಒಂದನೇ ತಾರೀಖಿನಂದು ಜನಪ್ರತಿನಿಧಿಗಳು ಹಾಗೂ ರೈತ ಪ್ರಮುಖರ ಸಭೆ ನಡೆಸಲಿವೆ.ಒಂದೊಂದು ಕಂಪನಿಗಳ ವ್ಯಾಪ್ತಿಯಲ್ಲಿ ನಾಲ್ಕು ಐದು ಜಿಲ್ಲೆಗಳು ಬರುವುದರಿಂದ ಕನಿಷ್ಟ ನಾಲ್ಕು ಅಥವಾ ಐದು ತಿಂಗಳಿಗೊಮ್ಮೆ ಪ್ರತೀ ಜಿಲ್ಲೆಗಳಲ್ಲಿ ಸಭೆ ನಡೆಯಲಿದೆ. 
ಇದೇ ರೀತಿ ತಾವೂ ಪ್ರತೀ ಮೂರು ತಿಂಗಳಿಗೊಮ್ಮೆ ಒಂದೊಂದು ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯಲ್ಲಿ ಶಾಸಕರು,ಸಂಸದರು ಹಾಗೂ ರೈತ ಪ್ರಮುಖರ ಸಭೆ ನಡೆಸುತ್ತೇನೆ ಎಂದು ಪ್ರಕಟಿಸಿದರು. 

ಅಲ್ಲಿ ಏನೇ ಸಮಸ್ಯೆಗಳಿದ್ದರೂ  ಬಗೆ ಹರಿಸುವ ಪ್ರಯತ್ನ ಮಾಡುತ್ತೇನೆ  ಎಂದು ನುಡಿದ ಅವರು,ಟ್ರಾನ್ಸ್‌ಫಾರ್ಮರ್ ಬದಲಿ ಮಾಡಲು,ದುರಸ್ಥಿ ಮಾಡಲು ಇಂಧನ ಇಲಾಖೆಯ ಯಾರಾದರೂ ಲಂಚ ಪಡೆದಿದ್ದಾರೆ ಎಂಬ ದೂರು ಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು. 

ಗಂಗಾಕಲ್ಯಾಣ ಯೋಜನೆ  ಹಾಗೂ ಇತರ ಬೋರವೆಲ್‌ಗಳಿಗೆ ಎಲ್ಲಾದರೂ  ವಿದ್ಯುತ್ ಸಂಪರ್ಕ ಬಾಕಿ ಇದ್ದರೆ ಮಾರ್ಚ್ ತಿಂಗಳ ಅಂತ್ಯದೊಳಗಾಗಿ ಒದಗಿಸಲು ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ಅವರು ಸ್ಪಷ್ಟ ಪಡಿಸಿದರು. 
ಬಯೋಮಾಸ್ ವಿದ್ಯುತ್ ಘಟಕ
 
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲೂ ತ್ಯಾಜ್ಯ ವಸ್ತುಗಳಿಂದ ವಿದ್ಯುತ್ ತಯಾರಿಸಲು  ಬಯೋಮಾಸ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಇದೇ ಸಂಧರ್ಭದಲ್ಲಿ ಸಚಿವ ಈಶ್ವರಪ್ಪ ತಿಳಿಸಿದರು. 
 
ಭತ್ತದ ಹೊಟ್ಟು,ಅಡಿಕೆ  ಸಿಪ್ಪೆ ಹಾಗೂ ಕಬ್ಬಿನ ಸಿಪ್ಪೆ ಸೇರಿದಂತೆ ಯಾವ್ಯಾವ ಜಿಲ್ಲೆಗಳಲ್ಲಿ ಯಾವ್ಯಾವ ವಸ್ತುಗಳು ಲಭಿಸುತ್ತವೆ ಎಂಬುದನ್ನು ನೋಡಿಕೊಂಡು ಪ್ರತಿಯೊಂದು ತಾಲ್ಲೂಕುಗಳಲ್ಲೂ ಇಂತಹ ಬಯೋಮಾಸ್ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. 
 
ಈಗಾಗಲೇ ಹಲವು ತಾಲ್ಲೂಕುಗಳಲ್ಲಿ  ಇಂತಹ ಘಟಕಗಳ ಸ್ಥಾಪನೆಗಾಗಿ ಟೆಂಡರ್  ಕರೆಯಲಾಗಿತ್ತು.ಈಗ ಉಳಿದ ತಾಲ್ಲೂಕುಗಳಲ್ಲೂ ಇಂತಹ ಘಟಕಗಳನ್ನು ತೆರೆಯಲು ಯಾರು ಮುಂದೆ ಬರುತ್ತಾರೆ ಎಂಬುದನ್ನು ನೋಡಿಕೊಂಡು ಕೆ‌ಇ‌ಆರ್‌ಸಿ ಅನುಮತಿ ಪಡೆದು ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಹೇಳಿದರು. 
 
ರಾಜ್ಯದ ಎಪ್ಪತ್ತು  ತಾಲ್ಲೂಕುಗಳಲ್ಲಿ ಜನವರಿ ೧೬ ರಿಂದ ನಿರಂತರ  ಜ್ಯೋತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದ ಅವರು,ಆರು ತಿಂಗಳಲ್ಲಿ ಇದು ಪೂರ್ಣವಾಗಲಿದೆ  ಎಂದು ನುಡಿದರು. 
ಡಾ||ಡಿ.ಎಂ.ನಂಜುಂಡಪ್ಪ  ವರದಿಯ ಆಧಾರದ ಮೇಲೆ ಹಿಂದುಳಿದ  ಮತ್ತು ಅತೀ ಹಿಂದುಳಿದ ತಾಲ್ಲೂಕುಗಳನ್ನು  ಈ ಯೋಜನೆಗೆ ಸೇರಿಸಲಾಗಿದೆ ಎಂದು ಹೇಳಿದರು. 
 
ಎರಡನೇ ಹಂತದ  ಯೋಜನೆಗೆ ಅಕ್ಟೋಬರ್ ಎರಡರಂದು ಚಾಲನೆ  ನೀಡುವುದಾಗಿ ಸ್ಪಷ್ಟ ಪಡಿಸಿದ ಅವರು,ಇದು ತ್ವರಿತವಾಗಿ ಪೂರ್ಣಗೊಳ್ಳಲಿದೆ ಎಂದು ಪ್ರಶೆಯೊಂದಕ್ಕೆ ನುಡಿದರು. 
ರಾಜ್ಯದ ಸ್ಥಳೀಯ  ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೋಲಾಗುತ್ತಿರುವ  ವಿದ್ಯುತ್‌ನ್ನು ಉಳಿಸಲು ಆಯಾ ಸ್ಥಳೀಯ  ಸಂಸ್ಥೆಗಳಿಗೆ ಹಲವಾರು ಬಾರಿ ಮನವಿ  ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದ ಅವರು,ಸಧ್ಯದ  ಪರಿಸ್ಥಿತಿಯಲ್ಲಿ ಸ್ಥಳೀಯ ಸಂಸ್ಥೆಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.


Share: