ಅಂಕೋಲಾ, ಜನವರಿ 15: ಶಬರಿಮಲೆಯಿಂದ ಹಿಂದಿರುಗುತ್ತಿದ್ದ ಭಕ್ತರ ತಂಡ ಪ್ರಯಾಣಿಸುತ್ತಿದ್ದ ವ್ಯಾನ್ ನಿನ್ನೆ ಸಂಜೆ ಸುಮಾರು ಐದು ಘಂಟೆಗೆ ಅಂಕೋಲಾ ಸಮೀಪದ ರಾಮನಗುಳಿ ಎಂಬ ಗ್ರಾಮದ ಬಳಿ ಅದಿರು ಲಾರಿಯೊಂದಕ್ಕೆ ಢಿಕ್ಕೆ ಹೊಡೆದ ಪರಿಣಾಮವಾಗಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿ ಇನ್ನೂ ಎಂಟು ಜನರಿಗೆ ಗಾಯಗಳಾಗಿವೆ.






ಈ ಭಕ್ತರು ಬಾಗಲಕೋಟೆಯವರಾಗಿದ್ದು ಶಬರಿಮಲೆ ಯಾತ್ರೆಯನ್ನು ಮುಗಿಸಿ ತಮ್ಮ ಊರಿಗೆ ಹಿಂದಿರುಗುತ್ತಿದ್ದರು. ಅಪಘಾತದ ವೇಲೆ ಲಾರಿ ವಿರುದ್ಧ ಬದಿಯಿಂದ ಧಾವಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ಪರಿಶೀಲನೆಯಿಂದ ಕಂಡುಬಂದಿದೆ. ಲಾರಿ ಯಲ್ಲಾಪುರದಿಂದ ಅಂಕೋಲಾ ಕಡೆಗೆ ಧಾವಿಸುತ್ತಿತ್ತು.
ಗಾಯಗೊಂಡವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಅಂಕೋಲಾದ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.
ಮೃತರ ವಿವರಗಳು: ಅಜ್ಜಾ ಸ್ವಾಮಿ ಪುರಾಣಿಕ್ (60), ವ್ಯಾನ್ ಚಾಲಕ ಪಿಂಟೋ (30), ಮಹಾಲಿಂಗಪ್ಪ ಕಾಳಪ್ಪ (30), ಶಿವಾನಂದ ಪಳಿಕಾಯಿ (35) ಮತ್ತು ಸಂಜೀವ ಮಲ್ಲಪ್ಪ ಬಡಿಗೇರ(12).
ಎಲ್ಲರೂ ಬಾಗಲಕೋಟೆಯ ಮುಧೋಳ ಗ್ರಾಮದವರಾಗಿದ್ದಾರೆ.