ನವದೆಹಲಿ,ಜನವರಿ ೨೬: ವಾಸ್ತು ಶಿಲ್ಪದ ಪ್ರಯೋಗಾಲಯ ಎಂದೇ ಹೆಸರಾದ ಕರ್ನಾಟಕ ರಾಜ್ಯದ ಪಟ್ಟದಕಲ್ಲಿನ ವೈಭವ ಸಾರುವ ಕಾಶೀ ವಿಶ್ವನಾಥ ಮತ್ತು ಮಲ್ಲಿಕಾರ್ಜುನ ದೇವಾಲಯಗಳ ಪ್ರತಿರೂಪ ಹೊತ್ತ ಕರ್ನಾಟಕದ ಸ್ತಬ್ಧಚಿತ್ರ ನವದೆಹಲಿಯಲ್ಲಿ ಮಂಗಳವಾರ ನಡೆದ ೬೧ನೇ ಗಣರಾಜ್ಯೋತ್ಸವ ಪರೇಡ್ನ ಮುಖ್ಯ ಆಕರ್ಷಣೆಯಾಗಿ ಹೊರಹೊಮ್ಮಿತು.
ತನ್ನ ಗಾಂಭೀರ್ಯ ಮತ್ತು ಅನುಪಮ ಶಿಲ್ಪಕಲಾ ಸೌಂದರ್ಯದ ಪ್ರತಿರೂಪವಾಗಿ ಹೊರಹೊಮ್ಮಿದ ಈ ಸ್ತಬ್ಧಚಿತ್ರ ಎಲ್ಲರ ಮನಸೂರೆಗೊಂಡಿತು. ರಾಜಪಥದಲ್ಲಿ ನಡೆದ ಪರೇಡ್ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಬರುತ್ತಿದ್ದಂತೆ ಪ್ರೇಕ್ಷಕರು ಕೇಕೆ ಹಾಕಿ, ಚಪ್ಪಾಳೆ ತಟ್ಟಿ ವ್ಯಕ್ತಪಡಿಸಿದ ಪ್ರತಿಕ್ರಿಯೆ ಕರ್ನಾಟಕದ ಸ್ತಬ್ಧಚಿತ್ರ ಪಡೆದುಕೊಂಡ ಜನಪ್ರಿಯತೆಗೆ ಸಾಕ್ಷಿಯಾಯಿತು.
ಸ್ತಬ್ಧಚಿತ್ರದೊಂದಿಗೆ ಸಾಗಿಬಂದ ಬಂದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಲಾವಿದರ ತಂಡ ತನ್ನ ವೀರಾವೇಶದಿಂದ ಕೂಡಿದ ಡೊಳ್ಳುವಾದ್ಯದ ರಿಂಗಣದೊಂದಿಗೆ ವೀಕ್ಷಕರಲ್ಲಿ ರೋಮಾಂಚನದ ಕಂಪನಗಳನ್ನು ಮೂಡಿಸಿತು. ಡೊಳ್ಳಾಸುರ ಎಂಬ ರಾಕ್ಷಸನ ವಧೆ ಮಾಡಿದ ಶಿವನು, ಆತನ ಹೊಟ್ಟೆಯನ್ನೇ ಡೊಳ್ಳನ್ನಾಗಿಸಿ, ನರಗಳನ್ನು ಹಗ್ಗ ಮಾಡಿ, ಕೈಕಾಲುಗಳನ್ನು ದೊಣ್ಣೆ ಮಾಡಿ ಡೊಳ್ಳು ನುಡಿಸಿದನೆನ್ನುವುದು ಪ್ರತೀತಿ. ಹೀಗೆ ಹುಟ್ಟು ಪಡೆದುಕೊಂಡ ಡೊಳ್ಳನ್ನು ಕರ್ನಾಟಕದ ಬಹುತೇಕ ಎಲ್ಲ ಶೈವ ದೇಗುಲಗಳ ಮುಂದೆ ಹಬ್ಬ ಹರಿದಿನಗಳಲ್ಲಿ ನುಡಿಸಲಾಗುತ್ತದೆ.
ವಿವಿಧ ರಾಜ್ಯಗಳು, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಒಟ್ಟು ೨೧ ಸ್ತಬ್ಧಚಿತ್ರಗಳು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ, ದೇಶದ ವಿವಿಧತೆ ಸಾರಿದವು. ಈ ಸ್ತಬ್ಧಚಿತ್ರಗಳಲ್ಲಿ ಮೊದಲನೆಯದಾಗಿ ರಾಜಸ್ತಾನದ ಜೈಪುರದಲ್ಲಿರುವ ’ಜಂತರ್ ಮಂತರ್’ ಸಾಗಿಹೋಯಿತು. ಅದರ ಹಿಂದೆ, ಮಣಿಪುರದ ’ಹಿಯಾಂಗ್ ತನಾಬಾ’ ಎಂಬ ದೋಣಿ ಓಟ ಸ್ಪರ್ಧೆಯ ಸ್ತಬ್ಧಚಿತ್ರ, ಬಿಹಾರದ ಭಾಗಲ್ಪುರದ ರೇಷ್ಮೆ ಉದ್ಯಮದ ಸ್ತಬ್ಧಚಿತ್ರ, ಮಹಾರಾಷ್ಟ್ರದ ಡಬ್ಬಾವಾಲಾಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಸಾಗಿ ಬಂದವು. ತದನಂತರ ಬಂದದ್ದೇ ಕರ್ನಾಟಕದಲ್ಲಿನ ವಿಶ್ವ ಪರಂಪರೆ ತಾಣಗಳಲ್ಲಿ ಒಂದಾದ ಪಟ್ಟದಕಲ್ಲಿನ ದೇಗುಲಗಳ ಸ್ತಬ್ಧಚಿತ್ರ. ಅದರೊಂದಿಗೆ ಸಾಗಿಬಂದ ವೀರಾವೇಶದ ಡೊಳ್ಳು ಕಲಾವಿದರು ಇಡೀ ಪರೇಡ್ಗೆ ಒಂದು ಕಳೆ ತಂದುಕೊಡುವಲ್ಲಿ ಯಶಸ್ವಿಯಾದರು.
ಇದಲ್ಲದೇ, ಮೇಘಾಲಯ, ತ್ರಿಪುರ, ಜಮ್ಮು ಮತ್ತು ಕಾಶ್ಮೀರ, ಗೋವಾ, ಛತ್ತೀಸಗಡ, ಕೇರಳ, ಮಿಜೋರಾಂ, ಉತ್ತರಾಖಂಡ ರಾಜ್ಯಗಳ ಸ್ತಬ್ಧಚಿತ್ರಗಳು ಸಾಗಿಬಂದವು. ಜೊತೆಗೆ, ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಲೋಕೋಪಯೋಗಿ ಇಲಾಖೆ, ಇಂಧನ ಮಂತ್ರಾಲಯ, ಕೃಷಿ ಮಂತ್ರಾಲಯ ಮತ್ತು ಬುಡಕಟ್ಟು ಜನರ ಮಂತ್ರಾಲಯ, ಯುವಜನ ಸೇವಾ ಮತ್ತು ಕ್ರೀಡಾ ಮಂತ್ರಾಲಯ ಸ್ತಬ್ಧಚಿತ್ರಗಳೊಂದಿಗೆ ಭಾರತೀಯ ರೈಲ್ವೆಯ ಸ್ತಬ್ಧಚಿತ್ರ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡವು.
ಜಮ್ಮು ಮತ್ತು ಕಾಶ್ಮೀರ:
ಮಹಾರಾಷ್ಟ್ರ
ಮೇಘಾಲಯ
ಕೇರಳ:
ರಾಜಸ್ಥಾನ
ಅತ್ಯಂತ ಸಡಗರದಿಂದ ನಡೆದ ಭಾರತೀಯ ಗಣತಂತ್ರದ ೬೧ನೇ ಗಣರಾಜ್ಯೋತ್ಸವ ಸಮಾರಂಭವು ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರ ಘನ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಬಾರಿ ಭಾರತ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳಾಗಿ ಕೊರಿಯಾ ಗಣರಾಜ್ಯದ ಅಧ್ಯಕ್ಷ ಶ್ರೀ ಲೀ ಮ್ಯೂಂಗ್ ಬಾಕ್ ಅವರು ಆಗಮಿಸಿದ್ದರು. ಉಪರಾಷ್ಟ್ರಪತಿ ಡಾ. ಹಮೀದ್ ಅನ್ಸಾರಿ, ಪ್ರಧಾನಿ ಡಾ. ಮನಮೋಹನ್ ಸಿಂಗ್, ರಕ್ಷಣಾ ಸಚಿವ ಶ್ರೀ ಎ.ಕೆ. ಆಂಟನಿ, ಬುಡಕಟ್ಟು ಜನ ಜಾತಿ ಮಂತ್ರಾಲಯದ ಸಚಿವ ಕಾಂತಿಲಾಲ್ ಬುರಿಯಾ ಹಾಗೂ ಇನ್ನಿತರ ಸಚಿವರು ಭಾಗವಹಿಸಿದ್ದರು.
ಬೆಳಿಗ್ಗೆ ೧೦.೦೦ ಘಂಟೆಗೆ ವಿಜಯಚೌಕದಿಂದ ಆರಂಭವಾದ ಗಣರಾಜ್ಯೋತ್ಸವ ಪರೇಡ್ನಲ್ಲಿ ಮೊದಲಿಗೆ ರಕ್ಷಣಾ ಮಂತ್ರಾಲಯದ ’ಅರ್ಜುನ್’ ಟ್ಯಾಂಕರ್ ಸೇರಿದಂತೆ ದೊಡ್ಡ ದೊಡ್ಡ ಯುದ್ಧಾಸ್ತ್ರಗಳು, ಅತ್ಯಂತ ಶಿಸ್ತುಬದ್ಧ ಸೈನಿಕರ ನಯನ ಮನೋಹರ ಕವಾಯತು, ಸೇನಾ ಪಡೆಗಳ ಬ್ಯಾಂಡ್ಗಳು, ಕುದುರೆ ಮತ್ತು ಒಂಟೆಗಳ ಮೇಲೆ ಸಾಗಿ ಹೋಗುವ ಸೈನಿಕ ತುಕಡಿಗಳು, ಎನ್ಸಿಸಿ ಕೆಡೆಟ್ಗಳು ಪರೇಡ್ಗೆ ಮೆರಗು ತಂದವು.

ಸುಖೋಯ್ ಯುದ್ಧ ವಿಮಾನಗಳು, ಡಾರ್ನಿಯರ್ ತರಬೇತಿ ವಿಮಾನಗಳು ಸೇರಿದಂತೆ ಭಾರತೀಯ ವಾಯು ಸೇನೆಗೆ ಸೇರಿದ ವಿಮಾನಗಳ ಅದ್ಭುತ ವೈಮಾನಿಕ ಪ್ರದರ್ಶನ ರೋಮಾಂಚನ ಮೂಡಿಸಿದರೆ, ರಕ್ಷಣಾ ಪಡೆಗಳ ಸೈನಿಕರ ಮೋಟರ್ ಬೈಕ್ನಲ್ಲಿನ ಸಾಹಸಗಳು ಮೈನವಿರೇಳಿಸಿದವು. ಕೊನೆಗೆ ಆಗಸದಲ್ಲಿ ಮೂಡಿದ ತ್ರಿವರ್ಣದ ಬಲೂನುಗಳು ಮಕ್ಕಳಿಗೆ ಹರ್ಷ ತಂದವು. ರಾಷ್ಟ್ರಗೀತೆಯೊಂದಿಗೆ ಆರಂಭವಾದ ಸಮಾರಂಭವು ಅದರೊಂದಿಗೆ ಕೊನೆಗೊಂಡಿತು.