ಭಟ್ಕಳ, ಜನವರಿ 15:ಟೆಂಡರ್ ಮೂಲಕ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳುವ ಭಟ್ಕಳ ಪುರಸಭೆಯ ಪ್ರಸ್ತಾಪಕ್ಕೆ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರ್ಮಿಕರು ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಭಟ್ಕಳ ಪುರಸಭೆಯಲ್ಲಿ ೧೯೯೮ರಿಂದ ಕನಿಷ್ಠ ೫೫ ಜನ ದಿನಗೂಲಿಗಳು ಪೌರ ಕಾರ್ಮಿಕರಾಗಿ ಕೆಲಸವನ್ನು ಮಾಡಿಕೊಂಡು ಬಂದಿದ್ದು, ೨೭ಜನರನ್ನು ಜೇಷ್ಠತೆಯ ಆಧಾರದ ಮೇಲೆ ‘ಡಿ’ ಗುಂಪಿನ ನೌಕರರೆಂದು ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ನೀಡಿರುತ್ತಾರೆ. ಉಳಿದವರನ್ನು ನಂತರ ಪರಿಗಣಿಸುವುದಾಗಿ ಹೇಳಲಾಗಿತ್ತಾದರೂ ಅದು ಇಲ್ಲಿಯವರೆಗೂ ನೆನೆಗುದಿಗೆ ಬಿದ್ದಿದೆ. ಈ ನಡುವೆ ೩-೧-೨೦೧೦ರಂದು ಭಟ್ಕಳ ಪುರಸಭೆಯು ಟೆಂಡರ್ ಮೂಲಕ ಪೌರಕಾರ್ಮಿಕರನ್ನು ನೇಮಿಸಕೊಳ್ಳುವ ಪ್ರಸ್ತಾಪವನ್ನು ಇಟ್ಟಿದ್ದು, ಇದು ಅನ್ಯಾಯದ ಪರಮಾವಧಿ ಎಂದು ಪೌರ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಟ್ಕಳ ಪುರಸಭೆಯ ಈ ಕ್ರಮದಿಂದಾಗಿ ನಿರ್ಗತಿಕರಾಗಬೇಕಾಗುತ್ತದೆ ಎಂದು ಅಳಲನ್ನು ತೋಡಿಕೊಂಡಿರುವ ಅವರು ದಲಿತ ವಿರೋಧಿ ನೀತಿಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಭಟ್ಕಳ ಉಪವಿಭಾಗಾಧಿಕಾರಿ ತ್ರಿಲೋಕಚಂದ್ರ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಶಿವಾಜಿ ಬನವಾಸಿ, ಪೌರಕಾರ್ಮಿಕರಾದ ಪಿ.ರಾಜ್ಕುಮಾರ್, ನಾಗರಾಜ, ಅಯ್ಯನಾರ್ ಮುಂತಾದವರು ಉಪಸ್ಥಿತರಿದ್ದರು.