ಬೆಂಗಳೂರು/ ಬಾಗಲಕೋಟೆ, ನ.೯ ಎದುರಾಗಿದ್ದ ದೊಡ್ಡ ಬಿಕ್ಕಟ್ಟಿನಿಂದ ಪಾರಾಗಿ ನಿಟ್ಟುಸಿರು ಬಿಡುವ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನಗತ್ಯವಾಗಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಮ್ಮ ರಾಜಕೀಯ ವಿರೋಧಿ ಪಿ.ಎಚ್.ಪೂಜಾರ್ ಅವರನ್ನು ಸೋಮವಾರ ಹಠಾತ್ತನೇ ಬಿಜೆಪಿಗೆ ಸೇರಿಸಿಕೊಂಡಿದ್ದರಿಂದ ಬೇಸರಗೊಂಡ ಬಾಗಲಕೋಟೆ ಹಾಲಿ ಶಾಸಕ ವೀರಣ್ಣ ಚರಂತಿಮಠ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರವನ್ನು ವಿಧಾನಸಭೆಯ ಅಧ್ಯಕ್ಷ ಜಗದೀಶ್ ಶೆಟ್ಟರ್ ಅವರಿಗೆ ಫ್ಯಾಕ್ಸ್ ಮೂಲಕ ರವಾನಿಸಲಾಗಿದ್ದು, ಇನ್ನೂ ಅಂಗೀಕಾರವಾಗಿಲ್ಲ.
ಚರಂತಿಮಠ ಇತ್ತೀಚೆಗೆ ಶೆಟ್ಟರ್ ಅವರ ನಾಯಕತ್ವ ಬೆಂಬಲಿಸಿ ಬಂಡಾಯ ಶಾಸಕರ ಬಣದಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮತ್ತೊಂದು ವಿವಾದವನ್ನೂ ಹುಟ್ಟು ಹಾಕುವ ಅಪಾಯ ಎದುರಾಗಿದೆ. ತಮ್ಮನ್ನು ರಾಜಕೀಯವಾಗಿ ಹಣಿಯುವ ಉದ್ದೇಶದಿಂದಲೇ ಪೂಜಾರ್ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ಚರಂತಿಮಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ ತಮ್ಮನ್ನು ಭೇಟಿ ಮಾಡಿ ಶುಭ ಕೋರಲು ಬಂದಿದ್ದ ಪೂಜಾರ್ ಅವರನ್ನು ‘ನಿಮ್ಮಂಥವರು ಪಕ್ಷದಲ್ಲಿ ಇರಬೇಕು. ಬನ್ನಿ...’ ಎಂದು ಆಹ್ವಾನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಲ ಸಮಯದಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಸೇರ್ಪಡೆಗೆ ವೇದಿಕೆ ರೂಪಿಸಿಕೊಟ್ಟರು. ಈ ಸೇರ್ಪಡೆ ಸಂದರ್ಭ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಉಪಸ್ಥಿತರಿದ್ದರು. ಪೂಜಾರ್ ಅವರೊಂದಿಗೆ ಬಾಗಲಕೋಟೆಯ ಎಪಿಎಂಸಿ ಅಧ್ಯಕ್ಷ ಜಕ್ಕನಗೌಡ್ರ, ಸತ್ಯನಾರಾಯಣ ಹೇಮಾದ್ರಿ, ತುಳಸಿಗೇರಿಯ ತಿಮ್ಮನಗೌಡ ಪಾಟೀಲ್ ಅವರೂ ಬಿಜೆಪಿಗೆ ಸೇರ್ಪಡೆಗೊಂಡರು.ಪೂಜಾರ್ ಸೇರ್ಪಡೆಗೆ ಪೂರಕವಾಗಿ ಪ್ರಾಥಮಿಕ ಸದಸ್ಯತ್ವ ನೀಡಬೇಕು. ಆದರೆ, ಅವರಿಗೆ ಸದಸ್ಯತ್ವ ನೀಡುವ ಜತೆಗೆ ೫೦ ಸದಸ್ಯತ್ವ ನೋಂದಣಿ ಅರ್ಜಿಗಳನ್ನೂ ನೀಡಿದರು. ಪದಾಧಿಕಾರಿಯಾಗಬೇಕಾದರೆ ೫೦ ಮಂದಿಯ ನೋಂದಣಿ ಮಾಡಿಸುವುದು ಕಡ್ಡಾಯ. ಸದಸ್ಯತ್ವ ಅಭಿಯಾನ ಮುಗಿದಿದ್ದರೂ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸದಸ್ಯತ್ವ ನೋಂದಣಿಗೆ ಅರ್ಜಿಗಳನ್ನು ನೀಡಿರುವುದರ ಹಿಂದೆ ಮುಂಬರುವ ದಿನಗಳಲ್ಲಿ ಅವರಿಗೆ ಪಕ್ಷದ ಪದಾಧಿಕಾರಿ ಹುದ್ದೆ ನೀಡುವ ಉದ್ದೇಶ ಅಡಗಿದೆ.
ಭಿನ್ನರ ಹಣಿಯುವ ತಂತ್ರ: ಪೂಜಾರ್ರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಯಡಿಯೂರಪ್ಪ ಚಾಣಕ್ಯ ತಂತ್ರ ಮೆರೆದಿದ್ದಾರೆ. ಬಿಜೆಪಿಯಿಂದ ಪೂಜಾರ್ ಎರಡು ಬಾರಿ ಶಾಸಕರಾಗಿದ್ದರು. ರಾಜಕೀಯ ಸ್ಥಿತ್ಯಂತರದಿಂದ ಜೆಡಿಎಸ್ ಸೇರಿದ್ದರು. ಪೂಜಾರ್,ಚರಂತಿಮಠ ನಡುವೆ ಸುಮಧುರ ಬಾಂಧವ್ಯವಿರಲಿಲ್ಲ. ಯಡಿಯೂರಪ್ಪ ಜತೆಗೂ ಚರಂತಿಮಠ ಸಂಬಂಧ ಅಷ್ಟಕಷ್ಟೆ. ಶೆಟ್ಟರ್ ಬಣದಲ್ಲಿ ಚರಂತಿಮಠ ಕಾಣಿಸಿಕೊಂಡಿದ್ದು ಸಿಎಂ ಕೆಂಗಣ್ಣಿಗೆ ಕಾರಣವಾಗಿದೆ ಎನ್ನಲಾಗಿದೆ. ‘ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಇದು ನನ್ನ ಮನೆ; ನಾನು ಮತ್ತೆ ಸೇರಿಕೊಂಡಿದ್ದೇನೆ. ಸೇರ್ಪಡೆಗೆ ಯಾರ ವಿರೋಧವೂ ಇಲ್ಲ’ ಎಂದು ಪೂಜಾರ್ ಪ್ರತಿಕ್ರಿಯಿಸಿದ್ದಾರೆ.
ಸೌಜನ್ಯ: ಕನ್ನಡಪ್ರಭ