ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಳ್ಳಾರಿ: ಕಟ್ಟಡ ಕುಸಿತ ದುರಂತ : ಭೃಷ್ಟತೆ- ನಿರ್ಲಕ್ಷ್ಯದ ಫಲ

ಬಳ್ಳಾರಿ: ಕಟ್ಟಡ ಕುಸಿತ ದುರಂತ : ಭೃಷ್ಟತೆ- ನಿರ್ಲಕ್ಷ್ಯದ ಫಲ

Fri, 12 Feb 2010 03:42:00  Office Staff   S.O. News Service

ಬಳ್ಳಾರಿ, ಫೆಬ್ರವರಿ 12:ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ 29 ಜನರನ್ನು ಬಲಿ ಪಡೆದ ಬಳ್ಳಾರಿಯ ನಿರ್ಮಾಣಹಂತದ ಕಟ್ಟಡ ಕುಸಿತಕ್ಕೆ ಕಾರಣ ಕಳಪೆ ಕಾಮಗಾರಿ, ಬಳ್ಳಾರಿ ಪಾಲಿಕೆಯ ಭ್ರಷ್ಟತೆ, ನಿರ್ಲಕ್ಷ್ಯ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೂಡ ಸಿಗಲಿಲ್ಲ ಎಂಬುದು ಬಳ್ಳಾರಿ ದೊರೆಗಳ ಕ್ರೌರ್ಯದ ಮತ್ತೊಂದು ಮುಖವನ್ನು ತೋರಿಸುತ್ತಿದೆ. ಕಟ್ಟಡ ನಿರ್ಮಿಸಿದ ಕಾರ್ಮಿಕರೇ ಅದರ ಕೆಳಗೆ ಮಣ್ಣಾದರು. ಮುಗ್ಧ ಹಾಸ್ಟೇಲ್ ವಿದ್ಯಾರ್ಥಿಗಳಿಬ್ಬರು ಬಲಿಯಾದರು. ಅಂದು ಜನವರಿ-26 ಇಡೀ ದೇಶಾದಾದ್ಯಂತ ಗಣರಾಜೋತ್ಸವ ಆಚರಿಸಿದ ದಿನ. ರಾತ್ರಿ ಸಮಯ ಸುಮಾರು 8:30 ಆಗಿತ್ತು. ಇಡೀ ಬಳ್ಳಾರಿ ನಗರ ಹಾಗೂ ರಾಜ್ಯದ ಜನತೆಗೆ ಒಂದು ದುರಂತದ ಸುದ್ಧಿ ಕಾದಿತ್ತು. ಬಳ್ಳಾರಿಯ ಗಾಂಧಿ ನಗರದ 2ನೇ ಕ್ರಾಸ್‌ನಲ್ಲಿರುವ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಕಳಪೆ ಕಾಮಗಾರಿಯಿಂದಾಗಿ ಕುಸಿದು ಸುಮಾರು 25ರಿಂದ 30 ಕಾರ್ಮಿಕರು ಹಾಗೂ ಇಬ್ಬರು ಹಾಸ್ಟೆಲ್ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಹೊಟ್ಟೆ ಪಾಡಿಗಾಗಿ ಕಟ್ಟಡ ಕೆಲಸಕ್ಕೆ ಆಂಧ್ರಪ್ರದೇಶ, ಉತ್ತರ ಪ್ರದೇಶ ಹಾಗೂ ರಾಜ್ಯದ ಬೆಳಗಾವಿ, ಗುಲ್ಬರ್ಗಾಜಿಲ್ಲೆಗಳಿಂದ ಬಳ್ಳಾರಿಯಲ್ಲಿ ಕಟ್ಟಡ ಕೆಲಸ ಮಾಡಿಕೊಂಡು ವಾಸವಾಗಿದ್ದ ಮಹಿಳೆಯರು, ಮಕ್ಕಳೂ ಸೇರಿದಂತೆ ಸುಮಾರು 40ಜನ ಕಾರ್ಮಿಕರು ತಾವು ಕಟ್ಟಿದ ಕಟ್ಟಡವೇ ಒಂದುದಿನ ತಮಗೆ ಮೃತ್ಯುವಾಗುತ್ತದೆಯೆಂದು ಕಲ್ಪನೆಯೂ ಮಾಡಿಕೊಂಡಿರಲಿಲ್ಲ. ಬೃಹತ್ ಕಟ್ಟಡದ ಪಕ್ಕದಲ್ಲಿಯೇ ಬಾಡಿಗೆ ಕಟ್ಟಡದಲ್ಲಿ ಬಿಸಿಎಂ ಹಾಸ್ಟೆಲ್ ಇದ್ದು, ಆರು ಅಂತಸ್ತಿನ ಕಟ್ಟಡ ರಾತ್ರಿ 8:30ಕ್ಕೆ ಏಕಾಏಕಿ ಕೆಳಗಿನ ಎರಡು ಅಂತಸ್ತು ಕುಸಿಯಿತ್ತು. ಇದರ ಪರಿಣಾಮ ಕಟ್ಟಡದ ಗೋಡೆಗಳು, ಹಾಸ್ಟೆಲ್ ಮೇಲೆ ಬಿದ್ದು ಊಟಮಾಡುತ್ತಿದ್ದ ಇಬ್ಬರು ಮುಗ್ಧ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ರುದ್ರೇಗೌಡ ಹಾಗೂ ಪ್ರಥಮ ಪಿಯುಸಿ ಕಲಾವಿಭಾಗದ ವಿದ್ಯಾರ್ಥಿ ಎಸ್. ಮಹೇಂದ್ರ ದುರಂತಕ್ಕೆ ಬಲಿಯಾಗಿರುವ ವಿದ್ಯಾರ್ಥಿಗಳು.

 

ಕಟ್ಟಡದ ಇಂಜಿನಿಯರ್ ಹಾಗೂ ಮಾಲೀಕ ಯಾರು?

ಇಂತಹ ಬೃಹತ್ ಕಳಪೆ ಕಟ್ಟಡ ಕಟ್ಟಿಸಿ ಮುಗ್ಧ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಇಂಜಿನಿಯರ್

 

....ಮಾಲೀಕ ಸೋಮಶೇಖರ್ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರ ಬೆಂಬಲಿಗ. ಅಲ್ಲದೆ ಶ್ರೀರಾಮುಲು ಹಾಗೂ ರೆಡ್ಡಿಗಳ ಕೆಲವು ಕಟ್ಟಡ ಕಟ್ಟಿರುವ (ಕು)ಖ್ಯಾತ ಇಂಜಿನಿಯರ್.

 

ಸ್ವಂತ ಕಟ್ಟಡಕ್ಕಾಗಿ ಹೋರಾಟ:

ಕಳೆದ 7ವರ್ಷಗಳಿಂದ ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಇಲಾಖೆ ಅಡಿಯಲ್ಲಿ ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದೆ. ಸರಿಯಾದ ಮೂಲಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ಪ್ರತಿದಿನ ಪರದಾಡುವ ಸ್ಥಿತಿ, ಮಳೆಬಂದರೆ ವಿದ್ಯಾರ್ಥಿಗಳು ಊರಿಗೆಹೋಗಿ ಅಭ್ಯಾಸ ಮಾಡಬೇಕಿತ್ತು. ಮಳೆ ಬಂದರೆ ಹಾಸ್ಟೆಲ್ ಸುತ್ತಮುತ್ತ ನೀರು ಹರಿದು ದ್ವೀಪದಂತಾಗುತ್ತಿತ್ತು .ಕಳೆದ ಮೂರು ವರ್ಷಗಳಿಂದ ಎಸ್.ಎಫ್.. ವಿದ್ಯಾರ್ಥಿ ಸಂಘಟನೆ ಈ ಹಾಸ್ಟೇಲ್‌ಗೆ ಸ್ವಂತ ಕಟ್ಟಡ ನಿರ್ಮಿಸುವಂತೆ ಆಗ್ರಹಿಸಿ ಹಲವು ಸಾರಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಹೋರಾಟದ ಫಲವಾಗಿ ಮತ್ತೊಂದೆಡೆ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ ವಿಳಂಬವಾಗುತ್ತಿದೆ. ಒಂದೆಡೆ ಬಳ್ಳಾರಿಯಲ್ಲಿ ದುರಂತ ಸಂಭವಿಸಿ ವಿದ್ಯಾರ್ಥಿಗಳು ಕಾರ್ಮಿಕರು ಸಾವಿಗೀಡಾಗಿ ಇನ್ನೂ ಕೆಲ ಕಾರ್ಮಿಕರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೆ, ರಾಜ್ಯಸರ್ಕಾರದ ಮುಖ್ಯಮಂತ್ರಿಗಳೂ ಸೇರಿದಂತೆ ಇನ್ನಿತರ ಮಂತ್ರಿಗಳು ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಹೋತ್ಸವವನ್ನು ಆಚರಿಸುತ್ತಾ ರಾಜಪ್ರಭುತ್ವದ ವೈಭವೀಕರಣದಲ್ಲಿ ತೊಡಗಿ ಆರೆಸ್ಸೆಸ್‌ನ ಅಜೆಂಡಾವನ್ನು ಜಾರಿಗೊಳಿಸುತ್ತಿದ್ದರು. ಇದೆಂಥಾ ವಿಪರ್ಯಾಸ.

 

ಮಹಾನಗರ ಪಾಲಿಕೆ ನಿರ್ಲಕ್ಷ:ಬಳ್ಳಾರಿ ನಗರದಲ್ಲಿ 2000ನೇ ಇಸ್ವಿಯಿಂದ ಬೃಹತ್ ಕಟ್ಟಡಗಳು ಭಾರಿ ಪ್ರಮಾಣದಲ್ಲಿ ತಲೆ ಎತ್ತುತ್ತಿವೆ. ಸುಮಾರು 8 ವರ್ಷಗಳಿಂದ ಬಳ್ಳಾರಿ ನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದುರಂತಕ್ಕೀಡಾಗಿರುವ ಕಟ್ಟಡವನ್ನು ಎರಡು ಮಹಡಿಗಳವರೆಗೆ ಮಾತ್ರವೇ ನಿರ್ಮಿಸಲು ಪಾಲಿಕೆಯ ಅನುಮತಿ ನೀಡಿದೆ. ಆದರೆ ಕಾನೂನು ಬಾಹಿರವಾಗಿ ಇನ್ನೂ ಮೂರು ಮಹಡಿಗಳನ್ನು ನಿರ್ಮಿಸಿರುವುದನ್ನು ನೋಡಿದರೆ ಇದರಲ್ಲಿ ಮಹಾನಗರ ಪಾಲಿಕೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಅನುಮಾನವಿದೆ. ಅಂದರೆ ದುರಂತ ಸಂಭವಿಸಲು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಹಾಗೂ ಕಳಪೆ ಕಾಮಗಾರಿಯೇ ಪ್ರಮುಖ ಕಾರಣವಾಗಿವೆ. ಇಂತಹ ಇನ್ನೆಷ್ಟು ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆಯೋ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.

 

ಸಿಗಲಿಲ್ಲ ಸೂಕ್ತ ಪರಿಹಾರ :ದುರಂತದಲ್ಲಿ ಸಾವಿಗೀಡಾದ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕರಿಗೆ ತಲಾ 1ಲಕ್ಷ ರೂಪಾಯಿಗಳನ್ನು ಹಾಗೂ ಗಾಯಗೊಂಡವರಿಗೆ 25ಸಾವಿರ ರೂಗಳನ್ನು ಪರಿಹಾರವಾಗಿ ಘೋಷಿಸಿ ಸರ್ಕಾರ ತನ್ನ ಜವಾಬ್ದಾರಿಯಿಂದ ಕೈತೊಳೆದುಕೊಂಡಿದೆ. ಆದರೆ ಮೃತಪಟ್ಟಿರುವ ಕಾರ್ಮಿಕರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳ ಗತೀಯೇನು? ಕೋಟಿ ಕೋಟಿ ಹಣವನ್ನು ಮಠಗಳಿಗೆ ನೀಡುತ್ತಿರುವ ಬಿಜೆಪಿ ಸರ್ಕಾರ ಹಾಗೂ ಅದಿರುವ್ಯಾಪಾರದಲ್ಲಿ ಪ್ರತಿದಿನ ಕೋಟ್ಯಾಂತರ ರೂಪಾಯಿಗಳನ್ನುಲಾಭ ಪಡೆಯುತ್ತಿರುವ ರೆಡ್ಡಿ ಸಹೋದರರು ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ನೀಡಲಿಲ್ಲ.

 

ದುರಂತ ನಡೆದ ರಾತ್ರಿ :ಸ್ಥಳಕ್ಕೆ ಎಸ್.ಎಫ್.ಐ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಲ್ಲದೇ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಸಹಾಯಕ್ಕೆ ಎಸ್.ಎಫ್., ಸಿ..ಟಿ.ಯು, ಜೆ.ಎಮ್.ಎಸ್, ಮುಖಂಡರು ಧಾವಿಸಿದ್ದಾರೆ.

 

ನ್ಯಾಯಾಂಗ ತನಿಖೆ ಹಾಗೂ ಸೂಕ್ತ ಪರಿಹಾರಕ್ಕಾಗಿ ಎಸ್.ಎಫ್.ಐ ಪ್ರತಿಭಟನೆ ಘಟನೆ ನಡೆದ ಮರುದಿನ ಬೆಳಿಗ್ಗೆ ಎಸ್

 

.ಎಫ್.ಐ ನೇತೃತ್ವದಲ್ಲಿ ಬಳ್ಳಾರಿ, ಹೊಸಪೇಟೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ಮೃತ ವಿದ್ಯಾರ್ಥಿಗಳಿಗೆ ಹಾಗೂ ಕಾರ್ಮಿಕರಿಗೆ, ತಲಾ 5ಲಕ್ಷ ಪರಿಹಾರ ಘೋಷಿಸಬೇಕೆಂದು. ಬಿಸಿಎಂ ಹಾಸ್ಟೆಲ್‌ಗೆ ಸ್ವಂತಕಟ್ಟಡ ಒದಗಿಸಬೇಕು ಹಾಗೂ ಮೂಲ ಸೌಕರ್ಯ ಒದಗಿಸಬೇಕೆಂದು ಸರ್ಕಾರನ್ನೂ ಆಗ್ರಹಿಸಲಾಗಿದೆ

 

ಹುಳ್ಳಿ ಉಮೇಶ್ 

ಸೌಜನ್ಯ: ಜನಶಕ್ತಿ 


Share: