ಭಟ್ಕಳ, ಜನವರಿ 14:ಪಡಿತರ ಚೀಟಿ ವಿತರಣೆಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸಲಾಗಿದೆ ಎಂದು ಆಪಾದಿಸಿರುವ ಭಟ್ಕಳ ತಾಲೂಕಿನ ವಿವಿಧ ಭಾಗಗಳ ಮಹಿಳೆಯರು, ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಮಂಗಳವಾರ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಹೊಟ್ಟೆ ಪಾಡಿಗಾಗಿ ನಾವೆಲ್ಲ ಕೂಲಿ ಕೆಲಸಕ್ಕೆ ತೆರಳುತ್ತಿದ್ದೇವೆ. ಮನೆಯ ಸಂಸಾರಕ್ಕಾಗಿ ಯಾರೂ ನೆರವನ್ನೂ ನೀಡದೇ ಹೋದರೂ ನಮಗೆ ಬಿಪಿಎಲ್ ಪಡಿತರವನ್ನು ನಿರಾಕರಿಸಲಾಗಿದೆ. ಅಧಿಕಾರಿಗಳಿಂದ ಸರ್ವೇ ಕಾರ್ಯವೇ ನಡೆದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಪಡಿತರ ಪಡೆಯಲು ವಿವಿಧ ಇಲಾಖೆಗಳಿಗೆ ಅಲೆದಾಡುತ್ತಿದ್ದೇವೆ. ಈ ಕುರಿತು ಹಲವು ಬಾರಿ ಮನವಿ ನೀಡುವುದರ ಮೂಲಕ ಅವರ ಗಮನವನ್ನು ಸೆಳೆಯಲಾಗಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ ಎಂದು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದರು. ಮೊದಲು ಸಂಬಂಧಿಸಿದ ಗ್ರಾಮ ಲೆಕ್ಕಿಗರನ್ನು ಸ್ಥಳಕ್ಕೆ ಕರೆಯಿಸಿ ಎಂದು ಪಟ್ಟು ಹಿಡಿದ ಮಹಿಳೆಯರು ಪಡಿತರ ಚೀಟಿ ನೀಡಲು ಕೆಲವೆಡೆ ಹಣದ ಚೌಕಾಸಿಯನ್ನೂ ನಡೆಸಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಆಹಾರ ನಿರೀಕ್ಷಕ ಶಂಕರಪ್ಪ ಆಕ್ರೋಶಿತರನ್ನು ಸಮಾಧಾನ ಪಡಿಸಲು ನಡೆಸಿದ ಯತ್ನ ಫಲಕಾರಿಯಾಗಲಿಲ್ಲ.

ತಹಸೀಲ್ದಾರ ಪ್ರವೇಶ: ಮಹಿಳೆಯರ ಧರಣಿ ಮುಂದುವರೆಯುತ್ತಿದ್ದಂತೆಯೇ ತಹಸೀಲ್ದಾರ ಎಸ್.ಎಮ್.ನಾಯ್ಕ, ಕಚೇರಿಯಿಂದ ಹೊರ ಬಂದು ಧರಣಿ ನಿರತರ ಅಹವಾಲುಗಳನ್ನು ಆಲಿಸಿದರು. ಈ
ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ವೇ ನಡೆದ ಸಂದರ್ಭದಲ್ಲಿ ಫಲಾನುಭವಿಗಳು ನೀಡಿದ ಮಾಹಿತಿಯ ಮೇರೆಗೆ ಪಡಿತರ ಚೀಟಿಯನ್ನು ವಿತರಿಸಲಾಗಿದೆ. ಅನ್ಯಾಯವೆಸಗಲಾಗಿದೆ ಎಂದು ಕಂಡು ಬಂದಲ್ಲಿ ಸಂಬಂಧಿಸಿದವರಿಂದ ಅರ್ಜಿಗಳನ್ನು ಪಡೆದು ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಧ್ಯಾಹ್ನದವರೆಗೂ ಕಚೇರಿಯ ಮುಂದೆ ಕುಳಿತು ಧರಣಿ ನಡೆಸಿದ ಮಹಿಳೆಯರು, ಆದಷ್ಟು ಬೇಗ ಸಮಸ್ಯೆ ಬಗೆ ಹರಿಸಿ. ಇಲ್ಲದೇ ಹೋದರೆ ಹೋರಾಟವನ್ನು ತೀವೃಗೊಳಿಸಲಾಗುವುದು. ಮುಂದೆ ಸಂಭವಿಸಬಹುದಾದ ಅನಾಹುತಕ್ಕೆ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.