ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ಕೆರೆಮನೆ ಮಹಾಬಲ ಹೆಗಡೆ ಜನಮನ್ನಣೆಯ ಕಲಾವಿದ: ಶ್ರದ್ಧಾಂಜಲಿ ಸಭೆಯಲ್ಲಿ ಅಂಬಾತನಯ ಮುದ್ರಾಡಿ

ಉಡುಪಿ: ಕೆರೆಮನೆ ಮಹಾಬಲ ಹೆಗಡೆ ಜನಮನ್ನಣೆಯ ಕಲಾವಿದ: ಶ್ರದ್ಧಾಂಜಲಿ ಸಭೆಯಲ್ಲಿ ಅಂಬಾತನಯ ಮುದ್ರಾಡಿ

Sun, 01 Nov 2009 03:18:00  Office Staff   S.O. News Service
ಉಡುಪಿ, ಅ.೩೧: ಯಕ್ಷಗಾನ ಮೇರುನಟನಾಗಿ ಮೆರೆದಿದ್ದ ಕೆರೆಮನೆ ಮಹಾಬಲ ಹೆಗಡೆ ಗುಂಪುಗಾರಿಕೆ ಯಿಂದ ಗುರುತಿಸಿಕೊಂಡವರಲ್ಲ. ಯಾವುದೇ ಪಾತ್ರಕ್ಕೂ ಜೀವ ತುಂಬುತ್ತಿದ್ದ ಅವರು ಅಪಾರ ಜನ ಮನ್ನಣೆ ಗಳಿಸಿದ್ದ ಅದ್ವೀತಿಯ ಕಲಾವಿದ ರಾಗಿದ್ದರು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.

ಉಡುಪಿ ಯಕ್ಷಗಾನ ಕಲಾರಂಗದಲ್ಲಿ ಶನಿವಾರ ಆಯೋಜಿಸಲಾದ ಕೆರೆಮನೆ ಮಹಾಬಲ ಹೆಗಡೆಯವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಯಕ್ಷಗಾನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿ ಅವಿಸ್ಮರ ಣೀಯ ಎನಿಸಿದ್ದ ಹೆಗಡೆಯವರ ಕುರಿತ ಅಧ್ಯಯನ ಪೂರ್ಣವಾದ ಗ್ರಂಥ ಇನ್ನೂ ಬರದಿರುವುದು ಬೇಸರದ ವಿಚಾರ ಎಂದರು.

ಯಕ್ಷಗಾನದ ಪ್ರತಿಯೊಂದು ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡುತ್ತಿದ್ದ ಮಹಾಬಲ ಹೆಗಡೆ ಇತರರನ್ನು ಮೈಮರೆಸುತ್ತಿದ್ದರು. ಯಕ್ಷಗಾನ ಕ್ಷೇತ್ರಕ್ಕೆ ಅವರು ಉತ್ತಮ ವಾದ ಶಿಷ್ಯ ಸಮೂಹವನ್ನೇ ನೀಡಿದರು ಎಂದು ಅವರು ತಿಳಿಸಿದರು.  

ಸಾಲಿಗ್ರಾಮ ಮಕ್ಕಳ ಮೇಳದ ವ್ಯವಸ್ಥಾಪಕ ಹಾಗೂ ಯಕ್ಷಗಾನ ವಿದ್ವಾಂಸ ಶ್ರೀಧರ ಹಂದೆ ಮಾತನಾಡಿ, ಮಹಾಬಲ ಹೆಗಡೆ ಯಕ್ಷಗಾನ ಚೌಕಟ್ಟಿನಲ್ಲಿಯೇ ಸಿದ್ಧಾಂತಕ್ಕೆ ತಕ್ಕಂತೆ ಪಾತ್ರ ಮಾಡುತ್ತಿದ್ದರು. ಅವರು ಕೇವಲ ವೇಷಧಾರಿಯಾಗಿರದೆ ಹಿಮ್ಮೇಳದಲ್ಲೂ ಗುರುತಿಸಿಕೊಂಡಿದ್ದರು. ರಂಗದಲ್ಲೂ ರಂಗದ ಹೊರಗೂ ಏಕ ವ್ಯಕ್ತಿತ್ವ ಹೊಂದಿದ್ದ ಹೆಗಡೆ ಮೇರು ನಟರಾ ಗಿದ್ದರು ಎಂದು ಹೇಳಿದರು.

ಯಕ್ಷಗಾನ ಕಲಾವಿದರಾದ ಹಿರಿಯಡಕ ಗೋಪಾಲ ರಾಯ, ಪ್ರೊ.ಎಂ.ಎಲ್.ಸಾಮಗ, ಕೆ.ಜಿ. ಮಂಜು ನುಡಿನಮನ ಸಲ್ಲಿಸಿದರು. ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

Share: