ಬೆಂಗಳೂರು,ಜನವರಿ 13: ಬಿಬಿಎಂಪಿ ಚುನಾವಣೆಗೆ ಹಣ ಸಂಗ್ರಹಿಸುವ ಉದ್ದೇಶದಿಂದಲೇ 3500 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ರಾತ್ರೋ ರಾತ್ರಿ ಅನುಮತಿ ನೀಡಿರುವ ಬಿಜೆಪಿ ಸರ್ಕಾರ, ಇನ್ನೊಂದು ವಿವಾದವನ್ನು ಮೈಮೇಲೆ ಹಾಕಿಕೊಂಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಹಲವಾರು ಗುತ್ತಿಗೆದಾರರಿಗೆ ಕಾಮಗಾರಿಯನ್ನು ಹಂಚಿದ್ದು, ಇದು ಕಾಂಗ್ರೆಸ್ - ಜೆಡಿಎಸ್ ವಲಯದ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.
ಬಿಬಿಎಂಪಿಗೆ ಪೆಬ್ರವರಿ ೨೧ ರಂದು ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಜ. ೧೫ ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಇದನ್ನು ಮನಗಂಡು ರಾತ್ರೋರಾತ್ರಿ ೩೫೦೦ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಗುತ್ತಿಗೆದಾರಿಗೆ ಕಾಮಗಾರಿ ನೀಡಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ರಸ್ತೆಗಳ ಅಗಲೀಕರಣ, ಕೆರೆಗಳ ಹೊಳೆತ್ತುವುದು, ಚರಂಡಿಗಳ ಹೊಳೆತ್ತಿ ಅಭಿವೃದ್ಧಿಪಡಿಸುವುದು, ತ್ಯಾಜ್ಯ ವಸ್ತುಗಳ ವಿಲೇವಾರಿ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಕರೆದಿದ್ದ ಟೆಂಡರ್ಗಳನ್ನು ಕಳೆದ ರಾತ್ರಿ ಒಡೆದು ಕಾಮಗಾರಿ ನೀಡಿರುವಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದಲ್ಲದೇ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಿದೆ.
ಜ. 15 ರಿಂದ ಚುನಾವಣಾ ನೀತಿ ಸಂಹಿತಿ ಜಾರಿಗೆ ಬರಲಿದೆ. ಜ. 14 ಮಕರ ಸಂಕ್ರಾಂತಿ ಪ್ರಯುಕ್ತ ಸರ್ಕಾರಿ ರಜೆ ಇರುವುದರಿಂದ ನಿನ್ನೆ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಪಾಲಿಕೆ ಸಿಬ್ಬಂದಿ ವಿಶೇಷ ಆಸಕ್ತಿಯಿಂದ ಕಾರ್ಯನಿರ್ವಹಿಸಿ ಬಹುಮಹಡಿ ಕಟ್ಟಡದಲ್ಲಿ ಕುಳಿತು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಸಿರುವುದು ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ಗುಮಾನಿ ದಟ್ಟವಾದ ಹರಡಿದೆ.
ರಾತ್ರೋರಾತ್ರಿ ಕಾಮಗಾರಿ ಗುತ್ತಿಗೆ ನೀಡುವ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಸಣ್ಣ ಪ್ರಮಾಣದ ಗುತ್ತಿಗೆದಾರರು ಸೇರಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಗುತ್ತಿಗೆದಾರರನ್ನು ಕಡೆಗಣಿಸಿ ಹೊರ ರಾಜ್ಯದ ಗುತ್ತಿಗೆದಾರರಿಗೆ ಮಣೆಹಾಕಿ ಗುತ್ತಿಗೆ ನೀಡಿರುವುದು, ನಗರದ ಗುತ್ತಿಗೆದಾರರನ್ನು ಕರೆಳಿಸಿದೆ. ಬಿಬಿಎಂಪಿ ಕ್ರಮ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರೆ.